ಧಿಯೋ ಯೋನಃ ಪ್ರಚೋದಯಾತ್....: February 2007

ಧಿಯೋ ಯೋನಃ ಪ್ರಚೋದಯಾತ್....

Friday, February 16, 2007

"ಆವರಣ"- ಒಂದು ಅನಾವರಣ....

ಭೈರಪ್ಪನವರ ಕಾದಂಬರಿಗಳು ಬೋರ್ ಹೊಡೆಸುತ್ತವೆ ಎಂದುಕೊಂಡಿದ್ದವನಿಗೆ ಗೃಹಭಂಗ ಓದಿದಮೇಲೆ ಗೊತ್ತಾಯ್ತು, ಐ ವಾಸ್ ವೆರಿ ರಾಂಗ್. ಅದಾದಮೇಲೆ ಅವರ ಮತ್ತೆರಡು ಕಾದಂಬರಿಗಳನ್ನು ಓದಿದೆ. ನಾಯಿನೆರಳು, ಸಾರ್ಥ. ಎರಡನ್ನೂ ಒಂದೊಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಈಗ ಭೈರಪ್ಪನವರ ಎಲ್ಲಾ ಕೃತಿಗಳನ್ನು ಸಂಗ್ರಹಿಸುವ ಕಾತರ.....
ಪೂರ್ವಾಭ್ಯಾಸ, ವಿಷಯ ಸಂಗ್ರಹಣೆ-ವಿಂಗಡಣೆ, ಸಂಗ್ರಹಿತ ವಿಷಯದ ಮೇಲೊಂದು ಕಾದಂಬರಿಯ ಸಣ್ಣ ಎಳೆ ಹೊಸೆದು, ಅದನ್ನು ಕಲಾತ್ಮಕವಾಗಿ ನೇಯ್ದು ಅದ್ಭುತ ಕಾದಂಬರಿಯನ್ನಗಿ ಮಾಡುವ ಪರಿ, "ಇಂಥದು ಇಂಥದೇ" ಎಂದು ಸಾಧಾರವಾಗಿ, ನೇರವಾಗಿ ಹೇಳುವ ಆ ಧಾರ್ಷ್ಟ್ಯ.... ಇವೆಲ್ಲವನ್ನೂ ಬಹುಶಃ ಭೈರಪ್ಪನವರೊಬ್ಬರೇ ಮಾಡಬಲ್ಲರೇನೊ?..
ಇರಲಿ, .. ಮೊನ್ನೆಯೀಚೆಗೆ "ಆವರಣ" ಬಿಡುಗಡೆಯಾಯ್ತು ಎಂದು ಕೇಳ್ಪಟ್ಟೆ. ದಿನಕ್ಕೆರಡುಮೂರು ಸಾವಿರ ಪ್ರತಿಗಳು ಖಾಲಿಯಗುತ್ತಿವೆಯಂತೆ ಎಂಬ ಸುದ್ದಿ. ಬಹಳ ವಿವಾದತ್ಮಕ ಸಂಗತಿಗಳಿಂದ ಕೂಡಿದೆ ಅಂತ ಮತ್ತೊಂದು ಕಡೆಯಿಂದ ಸುದ್ದಿ. ಬೆಂಗಳೂರಿನಲ್ಲಿ ಎಲ್ಲಿ ಹುಡುಕಿದರೂ ಒಂದು ಪ್ರತಿಯೂ ಇಲ್ಲ. ಕೊನೆಗೆ "ಅಂಕಿತ ಪ್ರಕಾಶನ"ದ ಪ್ರಕಾಶ್ ಕಂಬತ್ತಳ್ಳಿಯವರಲ್ಲಿ ಕೇಳಿದಾಗ "ಮುಂದಿನ ವಾರ ಬರುತ್ತೆ. ಬಂದ ದಿನವೇ ತೊಗೊಂಡು ಹೋಗಿ, ಇಲ್ಲದಿದ್ದರೆ ಮತ್ತೆ ಖಾಲಿಯಾದೀತು" ಎಂಬ ಉತ್ತರ. ಸರಿ, ಅಂತೂ ತೊಗೊಂಡಿದ್ದಾಯ್ತು.... ಓದೋಣವೆಂದು ಕುಳಿತೆ.....

ಕೆಲ ಪ್ರಶ್ನೆಗಳು....
ಇತಿಹಾಸವನ್ನು ಓದಿದ ನಾವು, ಯಾವತ್ತಾದರೂ ಅದರ ಸತ್ಯಾಸತ್ಯತೆಗಳನ್ನು ಅವಲೋಕಿಸಿದ್ದೇವೆಯೆ?.. ಇತಿಹಾಸವೆಂಬುದು ಸತ್ಯದ ಬುನಾದಿಯ ಮೇಲೆ ನಿಂತಿರುವ ನಮ್ಮ ಪೂರ್ವಕಾಲವಲ್ಲವೆ?.. ಪ್ರತಿಯೊಬ್ಬ ಇತಿಹಾಸಕಾರನೂ ತನಗೆ ತೋಚಿದಂತೆ ಅಥವಾ ಕಾಲಕ್ಕೆ ತಕ್ಕಂತೆ(?) ಇತಿಹಾಸವನ್ನು ತಿರುಚಿ ಬರೆದರೆ, ಅದನ್ನು ಓದುವ, ಅದರಿಂದ ಸ್ಫೂರ್ತಿಗೊಳ್ಳುವ, ಇತಿಹಾಸದ ಪುಟಗಳ ನೆಲೆಗಟ್ಟಿನ ಮೇಲೆ ತಮ್ಮ ನಂಬಿಕೆಯ ಗಿಡ ಬೆಳೆಸಿಕೊಳ್ಳುವವರ ಪಾಡೇನು? ಇದು ಮನುಕುಲಕ್ಕೆ ಬಗೆದ ದ್ರೋಹವಲ್ಲವೆ?.... ಇವೆಲ್ಲವೂ ಭೈರಪ್ಪನವರು ನಮ್ಮ ಮುಂದಿಡುವ ಪ್ರಶ್ನೆಗಳು....

ಆವರಣದ ಮುನ್ನುಡಿಯಲ್ಲಿ.........
ಸತ್ಯವನ್ನು ಮರೆಮಾಚುವ ಪ್ರಕ್ರಿಯೆಯನ್ನು ಆವರಣ ಎನ್ನುತ್ತಾರೆ. ಅಸತ್ಯ ಎನ್ನುವುದು ತಮೋರೂಪಿ, ಅದು ಸತ್ಯವನ್ನು ಆವರಿಸಿ, ವಸ್ತುಸ್ಥಿತಿಯನ್ನು ಮರೆಮಾಚಿ, ಸನ್ನಿವೇಶವನ್ನು ಸಂದೇಹಕಾರಿಯಾಗಿ ಮಾಡುತ್ತದೆ. ನಿಜ-ಸುಳ್ಳುಗಳ ಜಿಜ್ಞಾಸೆಯನ್ನು ತತ್ವದ ಮಟ್ಟಕ್ಕೇರಿಸಿರುವುದು ಭಾರತೀಯ ದರ್ಶನಶಾಸ್ತ್ರದ(ದರ್ಶನಕಾರರ?) ವೈಶಿಷ್ಟ್ಯ. ವಿಪರ್ಯಾಸವೂ ಕೂಡ !! ಸಾರ್ಥದ ಕಾಲದ ಇತಿಹಾಸವು ಕಾಲದ ಆವರಣಶಕ್ತಿಗೆ ಒಳಗಾಗಿಲ್ಲ. ಆದರೆ "ಆವರಣ"ದ ಕಾಲವೇ ಬೇರೆ. ಇದು ಭಾರತ ಇತಿಹಾಸದ ಬಹಳ ಸಂಕೀರ್ಣ ಅವಧಿ. ಇಲ್ಲಿ ಬರುವ ಪ್ರತಿಯೊಂದು ಎಳೆಯನ್ನೂ, ಆವರಣವೆಂಬ ಗೋಡೆಯನ್ನು ಭೇದಿಸಿ ಸತ್ಯವೆಂಬ ಸಾಧಾರವಿರುವ ನೆಲೆಗಟ್ಟಿನ ಮೇಲೆ ನೇಯುವ ಅನಿವಾರ್ಯತೆಯಿದೆ. ಇತಿಹಾಸದ ಅನಾವರಣದ ಮಧ್ಯೆ ಇತಿಹಾಸಕಾರ ಅಡ್ಡ ನಿಂತರೆ ಅದು ಇತಿಹಾಸದರ್ಶನವಾಗುವುದಿಲ್ಲ, ಇತಿಹಾಸಗ್ರಹಣವಾಗುತ್ತದೆ. ಪೂರ್ವಿಕರ ಯಾವ ಕೃತ್ಯಗಳನ್ನು ತಿರಸ್ಕರಿಸಬೇಕು, ಯಾವ ಸಾಧನೆಗಳನ್ನು ಪುರಸ್ಕರಿಸಬೇಕು ಎಂಬ ವಿವೇಚನೆಯ ಮೇಲೆ ನಮ್ಮ ಪ್ರೌಢತೆಯಿದೆ.

ಮರಳಿ ಅನಿಸಿಕೆಗಳಿಗೆ....
ಹೀಗೆ ಸಾಗುತ್ತದೆ ಮುನ್ನುಡಿಯ ವಿಚಾರ ಲಹರಿ.. ಭೈರಪ್ಪನವರು ಕಾದಂಬರಿಯಲ್ಲಿ ಆಧಾರಗ್ರಂಥಗಳ ಉಲ್ಲೇಖವನ್ನೂ ಕೊಟ್ಟಿದ್ದಾರೆ ಎಂಬ ಮಾತನ್ನು ಕೇಳಿದ್ದೆ. ನೋಡೋಣ, ಕಾದಂಬರಿಯನ್ನು ಓದುವ ಮೊದಲು, ಆಧಾರ ಗ್ರಂಥಗಳ ಟಿಪ್ಪಣಿಯಿದೆಯೇ ಎಂದು ಪುಟಗಳನ್ನು ತಿರುವುತ್ತಾ ಹೋದೆ. ಒಳಗೆ ಮೂರ್ನಾಲ್ಕು ಕಡೆ(ಕಾದಂಬರಿಯ ಭಾಗವಾಗಿ), ಕೊನೆಯಲ್ಲಿ ೫೧ ಆಧಾರಗಳ ಉಲ್ಲೇಖವಿದೆ!! ಅಂತರ್ಜಾಲದಲ್ಲಿ ಹುಡುಕೊಣವೆಂದು ಎಲ್ಲವನ್ನೂ "ಗೂಗ್ಲಿಂಗ್" ಮಾಡಿದೆ. ಪ್ರತಿಯೊಂದಕ್ಕೂ (ಕೊನೆಯ, ವಿವೇಕಾನಂದರ ಮಾತುಗಳನ್ನು ಬಿಟ್ಟು) ಒಂದಲ್ಲಾ ಒಂದು ರೆಫೆರೆನ್ಸ್ ಇದ್ದವು(ಕುತೂಹಲವಿದ್ದರೆ ಹುಡುಕಿನೋಡಿ!!).
ಒಂದು ಮಾತು; ನಮ್ಮ ವಿಶ್ವ(ರಾವ್) ಹೇಳಿದಂತೆ "ಈ ಕಾದಂಬರಿಯೂ ಆಧರಿಸಿದ್ದು ಇತಿಹಾಸ ಗ್ರಂಥಗಳನ್ನೇ ತಾನೇ? ಅವುಗಳನ್ನು ಬರೆದವನೂ ಪೂರ್ವಾಗ್ರಹಕ್ಕೊಳಗಾಗಿದ್ದರೆ?".... ಎನೇ ಇರಲಿ, ಭೈರಪ್ಪನವರು ಕಾದಂಬರಿಯಲ್ಲಿ ಕೊಟ್ಟಿರುವ ಆಧಾರಗಳಲ್ಲಿ ಬರುವ ಸಂಗತಿಗಳು ಸತ್ಯವೆಂದೇ ಅಂದುಕೊಂಡು ಮುಂದುವರಿಯೋಣ(ಅಟ್ ಲೀಸ್ಟ್ ಫ಼ಾರ್ ದಿಸ್ ರೀಡಿಂಗ್).....
ಒಬ್ಬ ಕಾದಂಬರಿಕಾರ ಐತಿಹಾಸಿಕ ವಿಷಯವನ್ನು ಅದರಲ್ಲೂ ಒಂದು ಧರ್ಮದ ಕುರಿತಾಗಿ ಬರೆಯಬೇಕಾದರೆ, ತನ್ನ ಸುತ್ತಲಿರುವ ಎಲ್ಲಾ ಧರ್ಮಗಳ ವರ್ತುಲದಿಂದ ಹೊರಗೆ ನಿಂತು ವಿಶ್ಲೇಷಿಸಬೇಕಾಗುತ್ತದೆ. ಈ ಮನೋಧರ್ಮ ಭೈರಪ್ಪನವರ ಕಾದಂಬರಿಗಳ ಆಶಯಗಳಲ್ಲಿ ಎದ್ದು ಕಾಣುತ್ತವೆ.

ಒಳಾವರಣದಲ್ಲಿ......
ಅವರಣ.. ಅಲ್ಲ, ಕಾದಂಬರಿಯೊಳಗೊಂದು ಕಾದಂಬರಿ.... ಉಹುಂ, ಇತಿಹಾಸ-ವಾಸ್ತವಗಳ ಸಾಕ್ಷಚಿತ್ರ ಏನಾದರೂ ಕರೆಯಿರಿ ಇದನ್ನು...
ರಜಿಯಾ ಎಂಬ ಧರ್ಮಾಂತರಿತ ಮಹಿಳೆಯ ಯೊಚನಾ ಲಹರಿಯೊಂದಿಗೆ ಪ್ರಾರಂಭವಾಗುತ್ತದೆ ಕಾದಂಬರಿ. ಪ್ರೀತಿಗೆ ಸಿಲುಕಿದ ಲಕ್ಷ್ಮಿಯ ಆವೇಶ, ಸಿನಿಮಾ ತರಬೇತಿಯೆಂಬ ಅಧುನಿಕ ಮನಸು, ಸ್ವಧರ್ಮದ ಮೇಲೆ ಕಿಚ್ಚು ಮುಂತಾದವು ಯೌವನದ ಕ್ರಾಂತಿಕಾರಿ ಮನಸ್ಥಿತಿಯನ್ನು ಬಿಂಬಿಸುತ್ತವೆ. ಮದುವೆಯಾದಮೇಲೆ ಅವಳಿಗೆ ಎದುರಾಗುವ ಜಿಜ್ಞಾಸೆಗಳು, ಸಂಸಾರದಲ್ಲಿ ಕಾಣುವ ನೋವು-ಹತಾಶೆಯ ಮೂಲಕ ಲೇಖಕರು, ವಾಸ್ತವಿಕತೆಯಲ್ಲಿ ಯಾವ ಧರ್ಮವೂ ಇದಕ್ಕೆ ಹೊರತಾದುದಲ್ಲ ಎಂದು ಚಿತ್ರಿಸುತ್ತಾರೆ.
ಹಂಪೆಯ ಇತಿಹಾಸದ ಮೇಲೊಂದು ಸಾಕ್ಷಚಿತ್ರ ಮಾಡಹೊರಟು ಮತ್ತೆ ತನ್ನೂರಿಗೆ ಮರಳುವ ಲಕ್ಷ್ಮಿ, ಗತಕಾಲದ ಇತಿಹಾಸದ ಮೇಲೆ ಸಂಶೋಧನೆಗೆ ಹೊರಡುವ ಮೂಲಕ ಕಾದಂಬರಿಯ ಓಘಕ್ಕೆ ವೇಗ ದೊರಕುತ್ತದೆ..
ಟಿಪ್ಪೂಸುಲ್ತಾನನ ಕಾಲದ ಆಚರಣೆಗಳು, ಆಡಳಿತಪದ್ಧತಿ, ಮತಾಂತರದ ಪ್ರವೃತ್ತಿ ಮುಂತಾದವುಗಳು ನಮ್ಮನ್ನು ಯೋಚನೆಯ ಒರೆಗೆ ಹಚ್ಚುತ್ತವೆ. ಬರಿಯ ಟಿಪ್ಪೂಸುಲ್ತಾನನನ್ನೇ ಏಕೆ ರಾಷ್ಟ್ರನಾಯಕನನ್ನಾಗಿ ಬಿಂಬಿಸಿದ್ದಾರೆ, ಮರಾಠರನ್ನೇಕೆ ಇಲ್ಲ? ಎಂಬ ಪ್ರಶ್ನೆ ಪ್ರಚೋದನಕಾರ್‍ಇಯಾಗಿ ಮೂಡಿಬಂದಿದೆ.
ಕಾದಂಬರಿಯ ಮುಖ್ಯಕಥೆಗೆ ಪೂರಕವಾಗಿ ಕಥಾನಾಯಕಿಯ ಕಾದಂಬರಿಯೂ ಪ್ರಾರಂಭವಾಗುತ್ತದೆ. ಬಹುಶಃ ಈ ಪ್ರಕಾರದ ಕಾದಂಬರಿ, ನಾನು ಓದುತ್ತಿರುವುದು ಇದೇ ಮೊದಲು(ಕಾದಂಬರಿಯೊಳಗೊಂದು ಕಾದಂಬರಿ).
ಪುಟ್ಟ ರಜಪೂತ ರಾಜ್ಯದ ಮೇಲೆ ಮೊಗಲರ ಧಾಳಿ, ಗೆದ್ದಮೇಲೆ ಅವರು ನಡೆದುಕೊಳ್ಳುವ ರೀತಿ, ಅವರ ಪರಮ ಕ್ರೂರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಸೋತವರನ್ನು ತಮ್ಮ ಧರ್ಮಕ್ಕೆ ಸೇರೆಂದು ಪ್ರೇರೇಪಿಸುವ(ಇಲ್ಲ, ಬಲಪ್ರಯೋಗಿಸುವ) ಕೃತ್ಯ, ದೇವಾಲಯ ನಿರ್ನಾಮ, ವಿಗ್ರಹಭಂಜನೆ, ಊರ ಹೆಸರನ್ನು ಬದಲಿಸುವುದು.... ಛೇ, ಘೋರವಲ್ಲವೇ ಎನಿಸಿಬಿಡುತ್ತದೆ.
ಸೋತ ರಾಜ್ಯದ ಯುವಕರನ್ನು, ಯುವತಿಯರನ್ನು ತಮ್ಮತಮ್ಮಲ್ಲಿ ಹಂಚಿಕೊಂಡು ಗುಲಾಮರನ್ನಾಗಿ ಮಾಡುವುದು.. ಆ ಗುಲಾಮರಲ್ಲೂ ಉಚ್ಚ ನೀಚ ಭೇಧಭಾವ, ಗುಲಾಮರನ್ನು ಬೇರೆಯವರಿಗೆ ಮಾರುವುದು-ಉಡುಗೊರೆ ಕೊಡುವುದು.... ಏನಿದು? ಇವೆಲ್ಲಾ ನಿಜಕ್ಕೂ ಇದ್ದವೆ ಎಂದು ಆಶ್ಚರ್ಯವಾಗುತ್ತದೆ.
ಗಂಡು ಗುಲಾಮರನ್ನು ನಪುಂಸಕರನ್ನಾಗಿ ಮಾಡಿ ಅವರನ್ನು ಜನಾನಾಕ್ಕೋ, ಬೇರೆ ಸೇವೆಗೋ ಹಚ್ಚುವುದು(ಕಾದಂಬರಿಯ ವಿವರಣೆ ಘೋರವಾಗಿದೆ).... ಭಗವಂತಾ, ಯಾವರೀತಿಯ ಹಿಂಸೆಯಿದು?........
ತಮ್ಮ ಧರ್ಮದ ಬಗ್ಗೆ ಒಣಪ್ರತಿಷ್ಟೆ, ಢಾಂಬಿಕತನ, ತಾವೇ ಮೇಲೆಂಬ ಒಣವಾದ, ಮೊಗಲ್ ಕಾಲದ ದೊಡ್ಡ(?)ಮನುಷ್ಯರ(ಧಾರ್ಮಿಕ ಮುಖಂಡರುಗಳ) ಬಗ್ಗೆ ರೇಜಿಗೆ ಹುಟ್ಟಿಸುತ್ತವೆ. ತಾವು ಗೆದ್ದ ರಾಜ್ಯದಲ್ಲಿರುವ ದೇವಾಲಯಗಳನ್ನು ಒಡೆದು, ಅಲ್ಲಿನ ವಿಗ್ರಹಗಳನ್ನು ಮಸೀದಿಯ ಮೆಟ್ಟಿಲಾಗಿ ಮಾಡುವುದೆಂದರೇನು? ಮತಾಂಧತೆಯೆಂಬ ಹುಚ್ಚುತನದ ಪರಮಾವಧಿಯಲ್ಲವೆ?
ಮಾಡಿಕೊಂಡ ಹತ್ತಾರು ಹೆಂಡತಿಯರಲ್ಲದೆ, ದಾಸಿಯರನ್ನೂ...... ನೀವೇ ಮುಂದಕ್ಕೆ ಯೋಚಿಸಿ. ಮತಾಂತರಗೊಂಡ ರಾಜಕುಮಾರ(ಗುಲಾಮ)ನಿಗೂ, ಸಾಧುವಿಗೂ ನಡೆಯುವ ಧರ್ಮಗಳ ಮೇಲಿನ ಚರ್ಚೆ ನಿಜಕ್ಕೂ ಚೆನ್ನಾಗಿದೆ. ಹಿಂದೂ ಪೂಜ್ಯಸ್ಥಳಗಳ ಮೇಲೆ ನಡೆದ ಧಾಳಿ, ಅವುಗಳ ವಿರೂಪ, ರೊಚ್ಚು ಎಬ್ಬಿಸುತ್ತವೆ. ಅದರಲ್ಲೂ ಕಾಶಿ! ಈಗ ಪೂಜಿಸುವ ದೇವಾಲಯ ದೇವಾಲಯವೇ ಅಲ್ಲ, ಅದಿರುವುದು ಗ್ಯಾನವಾಪಿ ಮಸೀದಿಯಾಗಿ ಎಂಬ ಅಂಶ ದಿಗ್ಭ್ರಮೆ ಮೂಡಿಸುತ್ತದೆ. ಪ್ರತಿಯೊಂದು ಇತಿಹಾಸಪ್ರಸಿದ್ಧ "ಘಾಟ್"ಗಳ ಹಿಂದೆಯೂ ಈ ರೀತಿಯ ನೋವಿನ ಕಥೆಯಿದೆಯೆಂಬುದು ನಮ್ಮನ್ನು ನಿಜವಾಗಿಯೂ ತಟ್ಟುತ್ತದೆ. ಔರಂಗಜೇಬನ ಅವಿವೇಕಿ, ಅತಿರೇಕಿ ವ್ಯಕ್ತಿತ್ವ ಇತಿಹಾಸದ ಮೇಲೆಳೆದ ಬರೆಯಂತೆ ಕಾಣಿಸುತ್ತದೆ.
ಲಕ್ಷ್ಮಿಯು ಬರೆದ ಕಾದಂಬರಿಯ ಮೇಲೆ ಅಸಡ್ಡೆ ತಾಳುವ ಅತಿಬುದ್ಧಿಜೀವಿ ವಿಮರ್ಶಕ ಸಾಹಿತಿಗಳು, ಪ್ರೊಫೆಸರರೆಂಬ ಜಾತ್ಯಾತೀತ ಸೋಗಿನ ಅಷಾಢಭೂತಿ ಪಾತ್ರ, ಲಕ್ಷ್ಮಿಯ ಕಾದಂಬರಿಯ ಅಷ್ಟೂ ಪ್ರತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳುವ ಅರಿವುಗೇಡಿ ಸರ್ಕಾರ.... ಎಲ್ಲವೂ ವಾಸ್ತವಿಕತೆಯ ಅತಿಘೋರ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ..........

ಅರಿಕೆ....
ಈ ಮೇಲಿನ ಒಳಾವರಣದ ಅನಾವರಣದಲ್ಲೇನಾದರೂ ನ್ಯೂನ್ಯತೆಯಿದ್ದರೆ, ದಯವಿಟ್ಟು ತಿಳಿಸಿ; ಹಾಗೆಯೇ, "ಆವರಣ" ಕುರಿತು ನಿಮ್ಮ ಅಭಿಪ್ರಾಯವನ್ನೂ ಕೂಡಾ.... ನನ್ನ ಈ ಅನಾವರಣ, ಓದುವಷ್ಟು ಸಹ್ಯವಾಗಿದ್ದರೆ ಕೃತಜ್ಞ.
ವಿಶ್ವಾಸವಿರಲಿ,
ಎಲ್.ಡೀ...........

Wednesday, February 14, 2007

ಆತ್ಮೀಯ "ಬಳೆಗಾರ"ನಿಗೊಂದು ಅಕ್ಷರ ಶ್ರದ್ಧಾಂಜಲಿ....

ಶಿವಮೊಗ್ಗ ವೆಂಕಟೇಶ್ ಇನ್ನಿಲ್ಲ.. ಮೈಸೂರು ಮಲ್ಲಿಗೆಯ "ಭಾಗ್ಯದ ಬಳೆಗಾರ" ನಿರ್ಗಮಿಸಿದ್ದಾರೆ.
ರಂಗಭೂಮಿಯೊಡನೆ ನಿಕಟ ನಂಟು ಹೊಂದಿದ್ದ ವೆಂಕಟೇಶ್, ತಮಗೆ ಸಿಕ್ಕಿದ್ದ ಕೆಲವೇ ಅವಕಾಶಗಳನ್ನೂ ಸಮರ್ಥವಾಗಿ ನಿಭಾಯಿಸಿದವರು.
ಸುಮಾರು 15-16 ವರ್ಷಗಳ ಹಿಂದೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ "ದಾಳ" ಫೋಟೋಕಾಮಿಕ್ ನಲ್ಲಿ ಮೊದಲು ಅವರ ಪರಿಚಯ. ನಂತರ ಕೆಲವು ಧಾರವಾಹಿಗಳಲ್ಲಿ....ಮೈಸೂರು ಮಲ್ಲಿಗೆ ಚಿತ್ರದ ಬಳೆಗಾರನಾಗಿ ತಮ್ಮ ಪ್ರತಿಭೆಯ ಅನಾವರಣ.
ಆದರೆ ವಿಧಿಯ ವಿಪರ್ಯಾಸ, ಅವರ ಪ್ರತಿಭೆಗೆ ಮನ್ನಣೆ ಸಿಗಲೇ ಇಲ್ಲ. ಇದಕ್ಕಾಗಿ ಅವರು ಬಹಳ ನೊಂದುಕೊಂಡಿದ್ದೂ ಹೌದು. ಮೊನ್ನೆಯೀಚೆಗೆ ಇಹಲೋಕದಿಂದ ದೂರ ಪಯಣ. ಕೊನೆಯ ಗಳಿಗೆಯಲ್ಲು ಆ ನೋವು ಅವರನ್ನು ಕಾಡುತ್ತಿತ್ತು ಎಂದು ಅವರ ಆಪ್ತರ, ಅಭಿಮಾನಿಗಳ ಅಭಿಪ್ರಾಯ.

Deepu, i'm sorry that i could not contact you....