ಧಿಯೋ ಯೋನಃ ಪ್ರಚೋದಯಾತ್....: June 2007

ಧಿಯೋ ಯೋನಃ ಪ್ರಚೋದಯಾತ್....

Friday, June 08, 2007

ಒಂದು ಸಿಂಪಲ್ ಪ್ರಶ್ನೆ..

ಎಂದಿನಂತೆ ಅವತ್ತೂ ಸಂಜೆ ಅವನು ೬:೧೦ಕ್ಕೆ ಆಫೀಸ್ ಬಿಡುತ್ತಾನೆ. ಡಬ್ಬಲ್ ರೋಡ್ ದಾಟಿ, ರಿಚ್ಮಂಡ್ ಸರ್ಕಲ್ ತಿರುಗಿ, ಹಡ್ಸನ್ ಸರ್ಕಲ್ ಹತ್ತಿರ ಬಂದಾಗ ೬:೩೦. ಅವನಿಗೆ ಏನೋ ನೆನಪಾಗುತ್ತದೆ. ಟ್ರಾಫಿಕ್ ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದವನ ಕಣ್ಣುಗಳು ಏನನ್ನೋ ಹುಡುಕುತ್ತವೆ.... ಅದೋ ಅಲ್ಲಿ!.... ಸಿಗ್ನಲ್ ಕ್ಲಿಯರ್ ಆದ ಮೇಲೆ ಬೈಕ್ ನಿಧಾನವಾಗಿ ಚಲಿಸುತ್ತದೆ. ೧೦ ಮಾರು ದೂರ ಹೋಗುವಷ್ಟರಲ್ಲೇ ಅವನು ಮತ್ತೆ ಬೈಕ್ ನಿಲ್ಲಿಸುತ್ತಾನೆ. ಪರ್ಸಿನಲ್ಲಿಯ ೧೦ ರೂಪಾಯಿ ನೋಟು ತೆಗೆದು ಕೈಚಾಚುತ್ತಾನೆ. ಪಕ್ಕದ ಫೂಟ್ ಪಾತ್ ನಿಂದ ಚಾಚಿದ, ಕೊಳಕಾಗಿ ಜಡ್ಡುಗಟ್ಟಿದ ಅಂಗೈಯಲ್ಲಿ ನೋಟನ್ನಿಡುತ್ತಾನೆ. ಒಂದು ಕ್ಷಣದಲ್ಲಿ ಏನೇನೊ ಆಲೋಚನೆಗಳು ತಲೆಯಲ್ಲಿ ಸಚಿತ್ರವಾಗಿ ಗಿರಗಿಟ್ಲೆ ಹೊಡೆಯತೊಡಗುತ್ತವೆ. ತಂತಾನೆ ಒಂದು ನಿಶ್ಯಬ್ದ ನಿಟ್ಟುಸಿರು. ಹಿಂಬದಿಯ ಹಾರ್ನ್ ಕೇಳಿ ಬೈಕ್ ಯಾಂತಿಕವಾಗಿ ಮನೆಯ ದಾರಿ ಹಿಡಿಯುತ್ತದೆ. ಕಳೆದ ೪ ದಿನಗಳಿಂದ ಅವನದು ಈ ದಿನಚರಿ.
ಹೌದು.. ಸರ್ಕಲ್ ನ ಫೂಟ್ ಪಾತ್ ನಲ್ಲಿ ಕುಳಿತಿದ್ದವನಿಗೆ ಎರಡೂ ಕಾಲಿಲ್ಲ; ಪೋಲಿಯೋದಿಂದಾಗಿ ತ್ರಾಣ ಕಳೆದುಕೊಂಡಿವೆ. ಆತ ದಿನಾ ಅಲ್ಲಿ ಬಂದು ಕುಳಿತಿರುತ್ತಾನೆ(ಬರ್ತಾನೆ?.. ಎಲ್ಲಿಂದ?.. ಅಸಲಿಗೆ ಸಂಜೆಯಾದಮೇಲೆ ಎಲ್ಲಿಗೆ ಹೋಗುತ್ತಾನೆ?.. ಮಳೆ ಬಂದ್ರೆ?.... ಬೆಳಿಗ್ಗೆ ತಿಂಡಿ ತಿಂದು ಬರುತ್ತಾನಾ?.. ಮಧ್ಯಾಹ್ನ ಊಟ?.. ಹೋಗ್ಲಿ, ರಾತ್ರಿಗೆ?..). ಆತ ತಾನಾಗಿಯೇ ಯಾವತ್ತೂ ಕೈಯೊಡ್ಡಲ್ಲ. ಕೊಡೋರು ಕೈಮುಂದೆ ಮಾಡಿದರೆ ಕಷ್ಟಪಟ್ಟು ತೆವಳಿಕೊಂಡು ಬಂದು ಕೈಚಾಚಿ ತೆಗೆದುಕೊಳ್ಳುತ್ತಾನೆ. ತೆವಳೀ ತೆವಳೀ ಕೊಳಕಾಗಿ ಒಡೆದ ಅಂಗಾಲಂತಾಗಿರುವ ಅಂಗೈಗಳು, ಜಡ್ಡುಗಟ್ಟಿದ ಮೊಣಕಾಲ್ಗಳು.... ಅವು ಜಗತ್ತಿಗೆ ಏನು ಹೇಳುತ್ತವೋ ಗೊತ್ತಿಲ್ಲ; ಅದರೆ, ನೆಲಕ್ಕೆ ಅಲೆದು ಹರಿದು ಹೋಗಿರುವ ಮಾಸಲು ಅಂಗಿಯ ಮುಂಬದಿಯ ಅಂಚು, ಯಾವುದೋ ಕಥೆ ಹೇಳುತ್ತದೆ....
ನನ ಬಾಲ್ಯದಾಗ ಕಷ್ಟ ಪಟ್ಟಿದ್ದು
ನನಗ ನೆನಪು ಇಲ್ಲ,
ಹತ್ತು ವರುಷದಾ ಹಿಂದೆ ಆ ಬಾಲ್ಯದಾ
ನೆನಪು ಕಾಡತಾವ ಎಲ್ಲ....

ಐದು ಜನರ ಸಂಸಾರದೊಳಗ
ಆಗಿದ್ದೆ ನಾ ಮುದ್ದಿನಾಂವ,
ಆದರೇನು ನಮ ಮ್ಯಾಲೆ
ಜನರ ಹಾಳ್ಗಣ್ಣು ಬೀಳತಾವ....

ಒಂದು ಮುಂಜಾನಿ ಎಲ್ಲ ಮಂದೀಗು
ಜ್ವರಾ ಹಿಡಿದುಕೊಂತ,
ಶಿವಾ ಬರೆದಿಟ್ಟ ನನ್ನ ಹಣೆಯಲ್ಲಿ
ನಡೆಯಬಾರದಂತ....

ನಾಕು ದಿನದಲ್ಲಿ ಈ ಅನಾಥನಾ
ಬಿಟ್ಟು ಹ್ವಾದರೆಲ್ಲ,
ಬಂಗಾರದಂಥ ಸಂಸಾರ ಹೋಗಿ
ಬೀದೀಗೆ ಬಿದ್ದೆನಲ್ಲ....

ಬೈಕ್ ಮನೆಗೆ ಬಂತು. ಸಾಯಿಶಕ್ತಿ ಹೋಟೆಲ್ ನಲ್ಲಿ ಆ ರಾತ್ರಿ ಅವರಿಬ್ಬರು ಎರಡೆರಡು ಪ್ಲೇನ್ ಪರೋಟ, ವೆಜ್ ಕಡಾಯ್ ಹೇಳಿ ಕುಳಿತಿದ್ದರು. ಯಾವುದೋ ಹರಟೆ, ಮಧ್ಯೆ ಪೋಲಿ ಜೋಕು ಇತ್ಯಾದಿ.. ಬಿಸಿಬಿಸಿ ಪರೋಟ ಬಂದ ತಕ್ಷಣ ಇಬ್ಬರದೂ ಮಾತು ಕಮ್ಮಿಯಾಗಿತ್ತು. ಅರ್ಧ ಪರೋಟ ಮುಗಿಸಿಲ್ಲ, ಹೊರಗೆ ಕುಂಭದ್ರೋಣ. ಎದುರಿಗಿದ್ದಂವ ಕೇಳಿದ, "ಮನೆಗೆ ಹ್ಯಾಗೆ ಹೋಗೋದು? ಮಳೆ ಬಂತಲ್ಲ?". ಯಾಕೋ ಇವನಿಗೆ ಹಡ್ಸನ್ ಸರ್ಕಲ್ ನೆನೆಪಾಯಿತು.."ಮಳೆ ಬಂದ್ರೆ?....". ಯಾರೋ ತಿವಿದಂತಾಯ್ತು, "ಆಹಾ, ತಿನ್ನು ತಿನ್ನು.... ತಿಂಗ್ಳ ಕೊನೆಗೆ ಸಾವಿರಗಟ್ಲೆ ಎಣಿಸ್ತೀಯ, ಬರೀ ಹತ್ರುಪಾಯಿ ಕೊಟ್ಟೇಂತ ದೊಡ್ಮನುಷ್ಯ ಆಗ್ಬಿಟ್ಯಾ?.. ಈಗೇನೋ ಮಳೆ ಬಂದು ಆ ಹುಡುಗನ ನೆನಪಾಯ್ತು;.. ವೀಕೆಂಡ್ ನಲ್ಲಿ ಫ್ರೆಂಡ್ಸ್ ಮನೆಗೋಗಿ ಮಜಾ ಮಾಡ್ತೀಯಲ್ಲ, ಆವಾಗ ನಿಂಗೇನೂ ಅನ್ಸಲ್ವಾ?.. ಅಲ್ಲಾ, ಪರ್ಸಲ್ಲಿ ಹತ್ರುಪಾಯಿ ನೋಟಿತ್ತು, ಕೊಟ್ಟೆ; ಅದೇ ಬರೀ ಸಾವಿರ್ರುಪಾಯಿ ನೋಟುಗಳೇ ಇದ್ದಿದ್ರೆ ಕೊಡ್ತಿದ್ಯಾ?.. ಈಗ ಹೇಳು.. ಉತ್ರ ಇದ್ಯಾ?.. ಮಳೆ ಬರ್ತಿದೆ, ಅವನ ಕತೆ ಏನಾಯ್ತೋ ಅಂತ ಬರೀ ಯೊಚ್ನೆ ಮಾಡ್ತೀಯಲ್ಲ, ಹೋಗಿ ನೋಡ್ಕೊಂಡು ಬರಕ್ಕಾಗಲ್ವಾ? ನಿಂಗೆ ಕಾಲಿಲ್ವಾ?.."....
ಎದುರಿಗಿದ್ದವನಿಗೆ ಹೇಳಿದ, "ಯಾಕೋ ಸೇರ್ತಾ ಇಲ್ಲ..".... "ಯಾಕೆ?"...."ಹಸಿವಿಲ್ಲ".. ಇವನಿಗೆ ಮಾತ್ರ ಗೊತ್ತು, ಕಾರಣ ಏನು ಅಂತ.
ಆದರೆ, ಆ ಸಿಂಪಲ್ ಪ್ರಶ್ನೆಗೆ ಉತ್ರ ಇದೆಯೇ?.....
ವಿಶ್ವಾಸವಿರಲಿ,
- ಎಲ್.ಡೀ