ಧಿಯೋ ಯೋನಃ ಪ್ರಚೋದಯಾತ್....: December 2006

ಧಿಯೋ ಯೋನಃ ಪ್ರಚೋದಯಾತ್....

Monday, December 18, 2006

writing about our recent company outing soon....

expect more action and exitement report in nextcoming blog !!!!!!!!!

Sunday, December 03, 2006

ಸುತ್ತಿ ನೋಡು ಚಿಕ್ಕಮಗಳೂರ....


ಬರೀ ಮುತ್ತೊಡಿ ಕಾನನದ ಅನುಭವದ ಬಗ್ಗೆ ಬರೆದರೆ, ಕರ್ನಾಟಕವೆಂಬ ವೈವಿಧ್ಯತೆಯ ಸ್ವರ್ಗಕ್ಕೆ ಬಗೆದ ಅಪಚಾರವಾದೀತು. ಬಾಬಾಬುಡನ್ ಗಿರಿಯೆಂಬ ಭೂಲೋಕಸ್ವರ್ಗದ ಬಗ್ಗೆಯೂ ಕೊಂಚ ಬರೆಯೋಣವೆನ್ನಿಸಿದೆ.

Let me start from beginning....

ಅವತ್ತು ಶನಿವಾರ ಬೆಳಿಗ್ಗೆ ೨:೩೦ ಗಂಟೆಗೆ ಬೆಂಗಳೂರಿನಿಂದ ಪ್ರಯಾಣ ಶುರು. ಒಟ್ಟು ೧೦ ಜನ, ೨ ಕಾರು. ನಮ್ಮ ಕಾರಿನಲ್ಲಿ ನಾನು, ಪ್ರಶಾಂತ್, ರಾಜು, ಶಿಲ್ಪಾ & ರಾಗಪ್ಪ. ಮತ್ತೊಂದು ಕಾರಿನಲ್ಲಿ ರವೀಶ, ವಿವೇಕ, ಸುಹಾಸ, ಲತಾ & ಸಂಪ. ನನಗಂತೂ "GANGZ" ಜೊತೆ ಇದೇ First Time.. ಸ್ವಲ್ಪ ಜಾಸ್ತಿನೇ "ಪ್ರಿಪೇರೇಶನ್" ಮಾಡ್ಕೊಂಡು ಬಂದಿದ್ದೆ ನಾನು. ಹರಟೆ, ಮಾತು.. ಜೊತೆಗೆ ಕೊಂಚ ಹಾಡು. ಬೆಂಗಳೂರಿನಿಂದ ಹಾಸನ ಹೈವೇ ವರೆಗೆ ಹೊತ್ತು ಹೋಗಿದ್ದೇ ತಿಳಿಯಲಿಲ್ಲ.(ರಾಜು ಬೇಸ್ತು ಬಿದ್ದಿದ್ದರ ವಿವರವನ್ನು ಸೆನ್ಸಾರ್ ಮಾಡಲಾಗಿದೆ.. :) ಹಹ್ಹಹ್ಹಾ.. ).
ಯಗಚಿ ಡ್ಯಾಮ್ ನಲ್ಲಿ ಸ್ವಲ್ಪ ಹೊತ್ತು ಕಳೆದೆವು.

ಚಿಕ್ಕಮಗಳೂರಿನ ಪ್ರವಾಸಿಮಂದಿರದಲ್ಲಿ ಸ್ವಲ್ಪಹೊತ್ತು Refresh ಆಗಿ ನಂತರ ಪ್ರಶಾಂತನ ದೊಡ್ಡಮ್ಮನ ಮನೆಗೆ ಭೇಟಿ. ಸೊಗಸಾದ ಮಸಾಲೆದೋಸೆ, Coffee..( ಬಲ್ಪು ಒಡೆದಿದ್ದು ಯಾರಿಗೂ ಹೇಳೋಲ್ಲ.. :) .. ).
ಚಿಕ್ಕಮಗಳೂರಿನಿಂದ ದಿನಸಿ ವಸ್ತುಗಳನ್ನು ಕಾರಿಗೆ ಹೇರಿಕೊಂಡು ಮುತ್ತೋಡಿಯತ್ತ ಪಯಣ. ಯಥಾಪ್ರಕಾರ ಹರಟೆ, ಪದ್ಯ, ಮದ್ಯ ಇತ್ಯಾದಿ.. :)
ಮದ್ಯಾಹ್ನ ೨:೦೦ ಹೊತ್ತಿಗೆ ಮುತ್ತೋಡಿಯಲ್ಲಿ ಇಳಿದೆವು. ಕೆಲ ಅಡಿಗೆ ವಸ್ತುಗಳನ್ನು ತರಲು ನಾನು, ಪ್ರಶಾಂತ ಕಾರಿನಲ್ಲಿ ಪಕ್ಕದ ಊರಿಗೆ ದೌಡು.೩:೩೦ರ ಹೊತ್ತಿಗೆ ಗೆಸ್ಟ್ ಹೌಸ್ ಗೆ ಪಯಣ. ಮದ್ಯಾಹ್ನ ೪:೦೦ ರ ಹೊತ್ತಿಗೆ ಮದ್ಯಾಹ್ನದ ಊಟ(!?). ಪುಳಿಯೊಗರೆ ತುಂಬಾ ಚೆನ್ನಾಗಿತ್ತು (ಅಥವಾ ನಾವು ಬಹಳ ಹಸಿದಿದ್ದೆವೊ ಏನೋ? ಹೆಹೆಹೆ)..ಇಂಥದ್ದೊಂದು ಜಾಗದಲ್ಲಿ ನನ್ನ ಮನೆಯಿರಬೇಕಾಗಿತ್ತು ಅಂತ ಅನ್ನಿಸಿದ್ದು ನಿಜ.. ಸುತ್ತಲೂ ಬರೀ ಕಾಡು, ಮಾನವ ಹಸ್ತಕ್ಷೇಪ ಇಲ್ಲದಿರುವ, ಕಣ್ಣು ಹಾಯಿಸಿದಷ್ಟು ದೂರವೂ ಕಾಣುವ ಹಸಿರು ಪರ್ವತ ಶ್ರೇಣಿ. ಇನ್ನೇನು ಬೇಕು ಮನಸು ಮುದಗೊಳ್ಳಲಿಕ್ಕೆ?
೫:೦೦ ಗಂಟೆಗೆ ಮತ್ತೆ ಗೆಸ್ಟ್ ಹೌಸ್ ಹಿಂಬದಿಯ ಗುಡ್ಡ ಹತ್ತಲು ಶುರು.
ಕೆಲ ತಾಂತ್ರಿಕ ಕಾರಣಗಳಿಂದ ಎಸ್ಟೇಟ್ ಪ್ರವೇಶಕ್ಕೆ ನಿರಾಕರಣೆ. ಆಲ್ಲೇ ಸ್ವಲ್ಪ ಹೊತ್ತು ಕಾಲ ಕಳೆದು ವಾಪಸ್ ಬರುವಾಗ ಕುಂಭದ್ರೋಣ ಮಳೆ. ಎರಡೇ ನಿಮಿಷಕ್ಕೆ ಮೈಯೆಲ್ಲಾ ಒದ್ದೆ. ಕತ್ತಲಾಗುತ್ತಿದ್ದಂತೆ, "ಭಗವಂತಾ, ಕರೆಂಟ್ ಇಲ್ಲದೆ ಇಲ್ಲಿಯ ಜನ ಹೇಗೆ ಇರುತ್ತಾರಪ್ಪಾ" ಅಂತ ಅನ್ನಿಸ್ತು. ಆದ್ರೆ ಮೊಂಬತ್ತಿಯ ಬೆಚ್ಚನೆ ಬೆಳಕಿನಲ್ಲಿ ಗೆಸ್ಟ್ ಹೌಸ್ ಒಳಗಡೆ ಓಡಾಡಿದಾಗ, ಆಧುನಿಕ ಜಗತ್ತಿನ ಪರಿವೆಯಿಲ್ಲದೆ ಹೀಗೇ ಇಲ್ಲೊಂದು ಮನೆ ಮಾಡಿ ಇದ್ದುಬಿಡೋಣವಾ ಅನ್ನಿಸ್ತು. "ಇಟ್ ವಾಸ್ ಅ ವಾರ್ಮ್ ಪ್ಯಾಲೇಸ್ ಓವರ್ ದೇರ್".

೭:೦೦ ಗಂಟೆಗೆ ಕೆಳಗೆ ಹೋಗಿ ಊಟ ತಂದೆವು.
೮:೩೦ಕ್ಕೆ ಶುರುವಾಯಿತು ನಮ್ಮ "ಗಾ(ಪಾ)ನ ಗೋಷ್ಠಿ"!!. ಬಹುಶಃ ದೈನಂದಿನ ಜಂಜಡಗಳನ್ನು ಬಿಟ್ಟು, ಒಂದು ಅತ್ಮೀಯ ಗೆಳೆಯರ ಗುಂಪು ಯಾವುದೋ ದಟ್ಟ ಕಾಡಿನ ಮಧ್ಯೆ ಅನಾಮಿಕರಾಗಿ ಸುತ್ತಲಿನ ಸೌಂದರ್ಯವನ್ನು ಸವಿಯುವಾಗ ಮಾತ್ರ, ಹೀಗೆ ತಮ್ಮ ಭಾವನೆಗಳನ್ನು, ಸಂತೋಷವನ್ನು ಹಂಚಿಕೊಳ್ಳಲು ಸಾಧ್ಯವೇನೋ? ರಾತ್ರಿ ೧೨:೦೦ರವರೆಗೂ ಹಾಡು, ಹಾಡು, ಹಾಡು.... Really I think we were the kishors, lathas, Rafis and Ashas there..


ಬೆಳಿಗ್ಗೆ ಎದ್ದು ನೋಡುತ್ತೇನೆ, ಸುತ್ತಲೂ ಪರ್ವತಶ್ರೇಣಿಯನ್ನಾವರಿಸಿರುವ ಮೋಡದ ಮೈದಾನ!!.. ಬೆಳಗಿನ ಹೊತ್ತಿನಲ್ಲಿ ಕಿಚಕಿಚ ಎಂದು ಹಕ್ಕಿಗಳ ಕೂಗು(ಅಬ್ಬಾ ಎಷ್ಟು ದಿನವಾಗಿತ್ತು ಗುಬ್ಬಚ್ಚಿಯನ್ನು ನೋಡಿ? ಬೆಂಗಳೂರಿನಲ್ಲಿ ಗುಬ್ಬಚ್ಚಿಯ ವಂಶವೇ ನಾಶವಾಗಿದೆಯೇನೊ? ಒಂದೂ ಕಾಣುವುದಿಲ್ಲ).
ಬೆಳಿಗ್ಗೆ ಕೆಳಗೆ ಇಳಿದು ಬರುವಾಗ ಆನೆ ಬೀಳಿಸಿದ್ದ ಮರವನ್ನು ನೊಡಿ, ನಿನ್ನೆ ಸ್ವಲ್ಪ ತಡವಾಗಿ ಊಟ ತರಲು ಕೆಳಗೆ ಇಳಿದಿದ್ದರೆ ಗತಿಯೇನಾಗುತ್ತಿತ್ತು ಅನ್ನಿಸಿತ್ತು.
೧೦:೦೦ಕ್ಕೆ ಬಾಬಾಬುಡನ್ ಗಿರಿಯತ್ತ ಪಯಣ. ಸುತ್ತಲೂ ತೇಗದ ಕಾಡುಗಳು, coffee ಎಸ್ಟೇಟುಗಳು, ಓಹ್!! (ಇಲ್ಲಿನ ಮನುಷ್ಯರಿಗಿನ್ನೂ ದುರಾಸೆ ಬಂದಿಲ್ಲವೆಂದು ಕಾಣುತ್ತಿದೆ).
ಬಾಬಾಬುಡನ್ ಗಿರಿಯನ್ನು ಹತ್ತುತ್ತಿದ್ದಂತೆ, ಅಹ್ಲಾದವೆನಿಸುವ ಗಾಳಿ.. ಹಸಿರ ಹೊದ್ದ ಶ್ರೇಣಿಗಳು.. ಅವಕ್ಕೊಂದು ಮಂಜಿನ ಮೋಡದ ಟೊಪ್ಪಿಗೆ.. ಮಾಯಾಲೋಕವಿದು!! ಮಾಣಿಕ್ಯಧಾರಾ ನೀರ್ಝರಿಯ ಹತ್ತಿರದ ಪರ್ವತಗಳು, ಆ ಪ್ರಪಾತ, ಹಸಿರೋ ಹಸಿರು.. ಕರುನಾಡ ತಾಯಿ ಸದಾ ಚಿನ್ಮಯಿ, ಸದಾ ಮೃಣ್ಮಯಿ..

ಮದ್ಯಾಹ್ನ ಬಾಬಬುಡನ್ ಗಿರಿಯಲ್ಲೆ ಊಟ.. ಮತ್ತೆ ಗಾಳಿಕೆರೆಯಲ್ಲಿ ನಮ್ಮ ಓಡಾಟ..ಈ ಸ್ಥಳವನ್ನು ಏನೆಂದು ಕರೆಯಲಿ!! ಮಾಯಾಲೋಕವೆನ್ನಲೆ?.. ಇಂದ್ರಪ್ರಸ್ಥವೆನ್ನಲೆ?.. ಹಸಿರುಪತ್ತಲವನ್ನುಟ್ಟ ಕನ್ನಡತಾಯಿಯ ಮಡಿಲೆನ್ನಲೆ?.. ಗೊತ್ತಿಲ್ಲದಂತೆ ಕಣ್ಣಿನಿಂದೆರಡು ಹನಿ ಜಾರಿದವು.. ನನ್ನದಿದು ನೆಲ, ನನ್ನದಿದು ಜಲ, ಕನ್ನಡಿಗ ನೀನೆ ಧನ್ಯ, ನೀನೆ ಧನ್ಯ....
ಭೂಲೋಕ ಸ್ವರ್ಗವಿದೆಯೆಂದಾದರೆ ಅದು ಇಲ್ಲೆ, ಇಲ್ಲೆ.. ಇಲ್ಲೇ.... ಬಣ್ಣ-ಬೆಳಕು ನೆರಳುಗಳ ಜೊತೆಗೆ ಸೂರ್ಯನ ಕಣ್ಣಾಮುಚ್ಚಾಲೆ.....

ಆ ರವಿಗೆ ನೆರಳುಬೆಳಕುಗಳ ಆಟ,
ಆ ಕುಂಚಕೆ ಏಳು ಬಣ್ಣಗಳ ಕೂಟ....


ಕಣ್ಣೊಂದಲ್ಲದೆ ಜಗತ್ತಿನ ಯಾವ ಕ್ಯಾಮೆರಾ ಕೂಡ ಸೆರೆಹಿಡಿಯಲಾಗದು ಈ ಸ್ವರ್ಗವನ್ನ....
ಬದುಕೆಂಬುದು ಅವಕಾಶ ಕೊಟ್ಟರೆ ಮತ್ತೊಮ್ಮೆ ಈ ಸ್ವರ್ಗಕ್ಕೆ ಬರುವಾಸೆ.. ರಾತ್ರಿಯ ಬೆಳ್ದಿಂಗಳಿನಲ್ಲಿ ಒಬ್ಬನೇ ಅಲೆದಾಡುವಾಸೆ..ನನ್ನನ್ನೂ ಜೊತೆಗೆ ಕರೆದುಕೊಂಡು ಹೋದ ಸ್ನೇಹಿತ-ಸ್ನೇಹಿತೆಯರಿಗೆ ಥ್ಯಾಂಕ್ಸ್ ಎಂದರೆ ಅದು ಬರೀ ಮಾತಾದೀತು.. ಅದಕ್ಕಿಂತ ಹೆಚ್ಚಿನ ಪದ ಇದೆಯೋ ಗೊತ್ತಿಲ್ಲ.... Thanks guys and gals.. thanks for everything.....