ಧಿಯೋ ಯೋನಃ ಪ್ರಚೋದಯಾತ್....: July 2007

ಧಿಯೋ ಯೋನಃ ಪ್ರಚೋದಯಾತ್....

Friday, July 27, 2007

ಬ್ಲಾಗಿಷ್ಟರ ಬಳಗಕ್ಕೆ ಮತ್ತೊಂದು ಸೇರ್ಪಡೆ..

ನನ್ನ ಹಳೆಯ ಗೆಳೆಯ (ಅರ್ಥಾತ್, ಚಡ್ಡೀ ದೋಸ್ತು) ಶ್ಯಾಮ, ನಮ್ಮ ಕಿಟ್ಟಿಸಾರ್ ಮಗ, ಬ್ಲಾಗ್ ಶುರು ಮಾಡಿದ್ದಾನೆ.
"ಹುಚ್ಚು ಮನಸಿನ ಹಲವು ಮುಖಗಳು"
ಸಹೃದಯಿ, ಉಪ್ಪಿಯ ಕಟ್ಟಾಭಿಮಾನಿ, ಕನ್ನಡಾಭಿಮಾನಿ ಗೆಳೆಯನಿಗಿದೋ, "ಹರಟೆಮಲ್ಲರ ಗುಂಪಿಗೆ ಸ್ವಾಗತ".ಅವನನ್ನೂ ಪ್ರೊತ್ಸಾಹಿಸಿ....
ವಿಶ್ವಾಸವಿರಲಿ,
-LD

Tuesday, July 10, 2007

ಮೆಸ್ ಇನ್‌ಚಾರ್ಜು ಮತ್ತು ಪಿಯುಸಿ ಹುಡುಗರ ಪಲಾಯನ ಪ್ರಸಂಗ

ಕಾಲೇಜಿಗೆ ಸೇರಿದ್ದು ಹಿಂಗೆ:
ಆಗ ತಾನೆ ಎಸ್ಸೆಸೆಲ್ಸಿ ಮುಗ್ದಿತ್ತು. ಆವತ್ತು ಬುಧವಾರ ಅಜ್ಜನ ವೈದಿಕ, ಎಲ್ಲಾ ನೆಂಟ್ರೂ ಬಂದಿದ್ರು. ಊಟಾದಮೇಲೆ ಮಾತಾಡ್ತಾ ಕೂತಿದ್ರು. ಹುಡ್ರನ್ನ ಕಾಲೇಜಿಗೆ ಸೇರಿಸೋ ವಿಚಾರ ಪ್ರಸ್ತಾಪಕ್ಕೆ ಬಂತು. ತೀರ್ಥಹಳ್ಳಿ ತುಂಗಾ ಕಾಲೇಜು, ಸಾಗರದ ಎಲ್.ಬಿ. ಕಾಲೇಜು ಬ್ಯಾಡ ಅಂತಾಯ್ತು. ಉಳಿದಿದ್ದು ಶಿವಮೊಗ್ಗದ ಡಿ.ವಿ.ಎಸ್. ಕಾಲೇಜು. ಅದಕ್ಕೇ ಸೇರಿಸೋಣ ಹುಡ್ರನ್ನ(ಅಂದ್ರೆ, ಲಿಂಗ್ದಳ್ಳಿ ಅಪ್ಪಿ, ಪಡವಗೋಡು ಅಪ್ಪಿಮತ್ತು ಬೇಳೂರು ಅಪ್ಪಿ....) ಅಂತ ತೀರ್ಮಾನಕ್ಕೆ ಎಲ್ಲರೂ ಬಂದ್ರು. ಅಷ್ಟೊತ್ತಿಗೆ ನೋಡಿ, ಬೇಳೂರು ಅಜ್ಜನ ಎಂಟ್ರಿ!! "ಅಲ್ಲಿಗೆಲ್ಲ ಎಂತಕಾ? ಉಜಿರೆಗೆ ಸೇರ್ಸಿ ಬಿಡನ.. ಭಾಳ ಚೆನ್ನಾಗಿದ್ದು, ಹುಡ್ರೂ ಹಿಡ್ತದಾಗಿರ್ತ" ಅಂತ ಸಲಹೆ ಕೊಟ್ಟ.... ಲಿಂಗ್ದಳ್ಳಿ ಅಪ್ಪಿಗೆ ದುಃಖ ಆಯ್ತು, "ಊರ್ ಬಿಟ್ಟು ಕಳುಸ್ತ್ರಲ, ಮಕ್ಳು ಬಗ್ಗೆ ನಿಂಗಕೇನೂ ಅನ್ಸದಿಲ್ಯಾ?".... ಅಂವ ಬಾಯ್ಬಿಟ್ಟು ಹೇಳ್ಲಿಲ್ಲ. ಎಲ್ಲ ಸರಿಯಾಗಿ ನಡೆದು, ತಿಂಗಳ ನಂತರ ಮೂರು ಜನರೂ ಉಜಿರೆ ಕಾಲೇಜಿಗೆ ಸೇರಿದ್ರು. ಲಿಂಗ್ದಳ್ಳಿ, ಪಡವಗೋಡು ಹುಡ್ರು ಹಾಸ್ಟೆಲ್‌ನಲ್ಲಿ, ಬೇಳೂರು ಅಪ್ಪಿ ಕಾನುಮನೆ ಮೆಸ್‌ನಲ್ಲಿ ಸೇರಿದ್ರು(ಬೇರೆಬೇರೆ ಯಾಕೆ ಅನ್ನದು ಮತ್ತೊಂದು ದೊಡ್ಡ ಕಥೆ). ಕಾಲೇಜು ಚೆನ್ನಾಗಿತ್ತು, ನಡಿತಾ ಇತ್ತು ಹೀಗೆ.. ಇತ್ತ ಹಾಸ್ಟೆಲ್‌ನಲ್ಲಿ "ಸಾಗರದ ಹುಡ್ರಿಗೆ" ಮೆಸ್ ಇನ್‍ಚಾರ್ಜು ಅಂತ ವಹಿಸಿಕೊಡಲಾಯ್ತು. ಮೊದಲು ನಾಕುದಿನ ಇವ್ರ ಠಾಕುಠೀಕೇನು, ಮನೆಗೆ ಫೋನ್ ಮಾಡಿ ಹೇಳಿ ಖುಶಿ ಪಡದೇನು.... ಆದ್ರೂ ಹಾಸ್ಟೆಲ್ ಒಂಥರಾ ಸರಿಯಾಗ್ತಿರಲಿಲ್ಲ ಇಬ್ರಿಗೂ. ಕಣ್ಣೆದುರಿಗೇ ಇಬ್ರು ಹಾಸ್ಟೆಲ್‌ಮೇಟ್ಸ್ ಉಜಿರೆ ಬಿಟ್ಟು ಅವರವರ ಊರಿನ ಕಾಲೇಜಿಗೆ ಟ್ರಾನ್ಸ್‌ಫರ್ ತಗೊಂಡು ಹೋದ್ರು(ಅದ್ರಲ್ಲೂ ಒಬ್ಬ ಇವರ ರೂಂಮೇಟ್). ಇವರಿಗೆ ಮತ್ತಷ್ಟು ತಲೆಬಿಸಿ ಶುರುವಾಯ್ತು.
ಹಬ್ಬ ಹರಿದಿನ , ನೆಂಟ್ರಿಷ್ಟ್ರು, ಕ್ರಿಕೆಟ್ಟು ಏನೂ ಇಲ್ಲ. ಬೆಲ್ ಹೊಡ್ದ ತಕ್ಷಣ ಊಟ ತಿಂಡಿ, ದಿನಕ್ಕೆ ಬರೀ ಒಂದರ್ಧ ಗಂಟೆ ಟೀವಿ.. ಬೆಳಿಗ್ಗೆ ೫ ಗಂಟೆಗೆ ಏಳಲಿಕ್ಕೆ ಬೆಲ್ಲು(ಬೆಳಿಗ್ಗೆ ೫ ಗಂಟೆ? ಗಡಿಯಾರದಲ್ಲಿ ಬೆಳಿಗ್ಗೆ ೫ ಗಂಟೆ ಅಂತ ಅವರು ನೋಡಿದ್ದು ತಿಳುವಳಿಕೆ ಬಂದಮೇಲೆ ಹಾಸ್ಟೆಲ್‌ನಲ್ಲೇ ಮೊದಲು).. ಬೆಳಿಗ್ಗೆ ಅರ್ಧಗಂಟೆ ಯೋಗ, ಕೊನೆಗೆ ಸ್ಟಡಿಟೈಮ್, ಸ್ನಾನ ಮಾಡಕ್ಕೆ ಕ್ಯೂ, ತಣ್ಣಗಾಗಿರೋ ತಿಂಡಿ, ಮದ್ಯಾಹ್ನ ಮತ್ತೆ ಹತ್ತೇ ನಿಮಿಷಕ್ಕೆ ಊಟ(ಕಾಲೇಜಿಗೆ ಓಡಿಹೋಗ್ಬೇಕಲ್ಲ).. ಸಂಜೆ ಸ್ಟಡಿ ಅವರ್ಸ್.... ತಲೆ ಚಿಟ್ಟುಹಿಡಿದು ಗೊಬ್ರಾಗಕ್ಕೆ ಇನ್ನೇನು ಬೇಕು?.. ಸ್ಟಡಿ ಟೈಮ್‌ನಲ್ಲಿ ಇಬ್ರೂ ಮಾತಾಡಿಕೊಳ್ತಿದ್ರು, "ಬಾವಯ್ಯ, ಈ ಊರು ಯಾಕೊ ಸರಿಯಿಲ್ಲೆ, ಯಾಕಾದ್ರೂ ಬಂದ್ವೋ ಅನ್ನುಸ್ತು" ಅಂತ ಪಡವಗೋಡಪ್ಪಿ ಹೇಳಿದ್ರೆ, ಲಿಂಗ್ದಳ್ಳಿ ಅಪ್ಪಿ, "ಹೂಂ ಬಾವಯ್ಯ, ಊರಾಗೇ ಸೇರಿದ್ರೆ ಚನ್ನಾಗಿತ್ತು" ಅಂತಿದ್ದ.

ಹೀಗೇ ಇರಲೊಂದು ದಿನ:
ಆ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಅಡುಗೆಭಟ್ರಿಗೆ ಮಧ್ಯಾಹ್ನದ ಅಡುಗೆಗೆ ಬೇಕಾದ ಸಾಮಾನನ್ನೆಲ್ಲಾ ಕೊಟ್ಟು ಇವರಿಬ್ರೂ ಹೊರಗಡೆ ಪೇಟೆಗೆ ಹೋದ್ರು(ವಾರದಲ್ಲಿ ಒಂದೇ ದಿನ, ಹೊರಗಡೆ ಬಿಡೋದು). ಸುಮಾರು ೨ ತಾಸಿನ ನಂತರ ಹಾಸ್ಟೆಲ್‌ಗೆ ವಾಪಸ್ ಬಂದ್ರು. ಲಿಂಗ್ದಳ್ಳಿ ಅಪ್ಪಿ, ಅಡುಗೆಮನೆಯಲ್ಲಿ ಎಲ್ಲಾ ತಯಾರಾಗಿದೆಯಾ ಅಂತ ನೋಡಿಕೊಂಡು ಬರಲು ಹೋದ. ಅಡುಗೆಮನೆ ಬಾಗಿಲು ಚಿಲಕ ಹಾಕಿತ್ತು. ಭಟ್ರು ಬಹುಶಃ ಕೆಲಸ ಮುಗಿಸಿ ಮನೆಗೆ ಹೋಗಿರಬಹುದೇನೋ ಎಂದುಕೊಂಡು ಅಡುಗೆಮನೆ ಬಾಗಿಲು ತೆಗೆದ. ಅಷ್ಟೆ!! ಅಲ್ಲಿ ನೋಡಿದ ದೃಶ್ಯ ಅವನನ್ನು ಬೆಚ್ಚಿಬೀಳಿಸಿತು. ಹೆದರಿಕೆಯೋ, ಹೇಸಿಗೆಯೋ ಏನಾಯ್ತು ಗೊತ್ತಿಲ್ಲ, ಧಡ್ಡನೆ ಅಡುಗೆಮನೆ ಬಾಗಿಲು ಹಾಕಿದವನೇ, ರೂಮಿಗೆ ಓಡಿದ. "ಬಾವಯ್ಯ, ಬಾವಯ್ಯ.... ಮನೆಗೆ ಹೋಗ್ಬುಡನ ನಡಿ, ಇಲ್ಲಿರದೇ ಬ್ಯಾಡ...."
"ಯಂತಾತ? ಯಂತಕ್ಕೆ ಹಿಂಗೆ ಗಾಬ್ರಿ ಆಯ್ದೆ?".
"ಅದೆಲ್ಲ ಹೇಳಕ್ಕೆ ಟೈಮಿಲ್ಲೆ.. ಪ್ಯಾಕ್ ಮಾಡನ ನಡಿ.".
"ಸರಿ ಹಂಗಾದ್ರೆ.. ಊಟ ಮಾಡ್ಕ್ಯಂಡು ಮಾಡನ".
"ಹೂ.. ಆದ್ರೆ ಊಟ ಹೊರಗಡೆ ಮಾಡ್ಕ್ಯಂಡು ಬರನ".
"ಏ, ಯಂತಾಯ್ದು ಹೇಳಾ.. ಹೊರಗಡೆ ಯಂತಕೆ?".
"ಅದೆಲ್ಲ ಕೇಳಡ ಪ್ಲೀಸ್.. ಇವತ್ತೇ ಹೊರಡನ...".
"ಸರಿ ನೀ ಹೇಳಿದ್ಮೇಲೆ.. ಯಂತದೋ ನಡ್ದಿರಕು, ನೀ ಹೇಳ್ತಾ ಇಲ್ಲೆ.."
ಲಿಂಗ್ದಳ್ಳಿ ಅಪ್ಪಿಗೆ ಅಲ್ಲಿ ನೋಡಿದ ದೃಶ್ಯ ಮತ್ತೆ ಮನಸ್ಸಿನಲ್ಲಿ ಹಾದುಹೋಯಿತು.. ಆಡುಗೆಮನೆಯ ಕಿಟಕಿಯ ಜಾಲರಿಯ ದೊಡ್ಡ ಕಿಂಡಿಯಿಂದ ಆಗಷ್ಟೆ(?!) ಒಳಗೆ ಬಂದ ಮಂಗವೊಂದು ಅಲ್ಲಿ ಕಟ್ಟೆಯ ಮೇಲಿಟ್ಟ ಹುಳಿಯ ಪಾತ್ರೆಯ ಕಡೆಗೆ ಕೈಚಾಚುತ್ತಿತ್ತು.. ಹೊಟ್ಟೆಯಾಳದಿಂದ ಹೇವರಿಕೆಯೊಂದು ಬಂದಂತಾಗಿ, ಬಾಗಿಲನ್ನು ಹಾಗೇ ದೂಕಿ, ಲಿಂಗ್ದಳ್ಳಿ ಅಪ್ಪಿ ರೂಮಿಗೆ ಓಡಿದ್ದ.
ಅವರು ಪೇಟೆಗೆ ಹೋಗಿ ಊಟ ಮಾಡಿ, ಪ್ಯಾಕ್ ಮಾಡಿ ಹೊರಡುವ ಹೊತ್ತಿಗೆ ಮಧ್ಯಾಹ್ನ ೨:೩೦... ಆದರೆ ೨:೨೦ಕ್ಕೆ ಬೆಳ್ತಂಗಡಿಯಿಂದ ಸಾಗರಕ್ಕೆ ಹೊರಡುವ ಮಿನಿ ಬಸ್ಸು ಹೋಗಿಯಾಗಿತ್ತು. ಲಿಂಗ್ದಳ್ಳಿ ಅಪ್ಪಿ ಹೇಳಿದ, "ಬಾವಯ್ಯ, ಲೇಟಾಗೋತು.. ನಾಳೆ ಹೊರಡನ..ನಂಗೆ ಇನ್ನು ನಾಳೆ ಬೇಳಿಗ್ಗೆನೇ ಮೇಗರವಳ್ಳಿಗೆ ಡೈರೆಕ್ಟ್ ಬಸ್ಸು".
"ನಾನು ಇವತ್ತೇ ಹೋರಡ್ತಿ ಸಾಗರಕ್ಕೆ.. ಚಾರ್ಮಾಡಿ-ಶಿವಮೊಗ್ಗದ ರೂಟ್ ಮೇಲೆ ಬಸ್ಸ್ ಇದ್ದು..".
"ಸರಿ.. ಊರಲ್ಲಿ ಸಿಗನ ಹಂಗಾದ್ರೆ".
ಪಡವಗೋಡಪ್ಪಿ ಚಾರ್ಮಾಡಿ ಮೇಲೆ ಶಿವಮೊಗ್ಗಕ್ಕೆ ಹೊರಡುವ ಬಸ್ಸು ಹತ್ತಿದ. ಇತ್ತ ಹಾಸ್ಟೆಲ್‌ನಲ್ಲಿ ಲಿಂಗ್ದಳ್ಳಿ ಅಪ್ಪಿಗೆ ಚಡಪಡಿಕೆ. ನಾಳೆ ಬೆಳಿಗ್ಗೆ ತಾನು ಊರಿಗೆ ಹೊರಡುತ್ತೇನೆ, ಹೋದಮೇಲೆ ಏನಾಗಬಹುದು? ಅಪ್ಪ ಬೇರೆ "ಅಲ್ಲೇ ಓದಕ್ಕು.. ವಾಪಸ್ ಬಂದ್ರೆ ಇಲ್ಲೆಲ್ಲೂ ಕಾಲೇಜಿಗೆ ಸೇರ್ಸದಿಲ್ಲೆ.. ದನ ಕಾಯ್ಕ್ಯಂಡು ಇರ್ಲಕ್ಕಡ" ಅಂತ ಅವತ್ತು ಫೊನ್ ಮಾಡಿದಾಗ ಹೇಳಿದ್ದ.. ಏನಾದ್ರಾಗ್ಲಿ, ಹೋಗದೇ ಸೈ ಅಂತ ಮನಸ್ಸಿನಲ್ಲಿ ನಿರ್ಧಾರ ಮಾಡಿಕೊಂಡು ಅವತ್ತಿನ ದಿನ ದೂಡಿದ. ಅತ್ತ ಪಡವಗೋಡಪ್ಪಿ ಅವತ್ತೇ ತಡರಾತ್ರಿ ಸಾಗರ ತಲುಪಿದ. ತನ್ನ ಮನೆಗೆ ಹೋಗದೆ, ಸೀದಾ ಸಾಗರದಲ್ಲಿದ್ದ ತನ್ನ ಚಿಕ್ಕಪ್ಪನ ಮನೆಗೆ ಹೋದ. ಪಾಪ ಚಿಕ್ಕಪ್ಪನೋ ಬಹಳ ಸೌಮ್ಯ ಮನುಷ್ಯ. ಅವನು ಅಣ್ಣನಿಗೆ(ಅಂದ್ರೆ ಪಡವಗೋಡಪ್ಪಿಯ ಅಪ್ಪನಿಗೆ) ಫೋನಿಸಿದ.
"ಅಣ್ಣ.. ಅಪ್ಪಿ ಮನಿಗೆ ಬೈಂದ.. ಇಲ್ಲೇ ಇದ್ದ.. ಅವಂಗೆ ಉಜಿರೆ ಬ್ಯಾಡ್ದಡ..".
"ಹಾಂ!!.. ಇಲ್ಲೆಲ್ಲೂ ಕಾಲೇಜಿಗೆ ಸೇರ್ಸದಿಲ್ಲೆ ಅಂತ ಬೈಯ್ಯಕ್ಕಾಗಿತ್ತು ನೀನು?"
"ಹಂಗೆ ಹೇಳ್ದಿ ಅವಂಗೆ.. ಸೇರ್ಸದಿದ್ರೆ ಇಲ್ಲೆ.. ಮನೆಲೇ ಇರ್ತಿ ಅಂತಾ ಇದ್ದ.. ಏನ್ ಮಾಡದು?.. ನಾಳೆ ಲಿಂಗ್ದಳ್ಳಿ ಅಪ್ಪಿನೂ ಅಲ್ಲಿಂದ ವಾಪಸ್ ಹೊಂಟಿದ್ನಡ..".
"ನಾನು ಅರ್ಜೆಂಟಾಗಿ ಲಿಂಗ್ದಳ್ಳಿ ಬಾವಂಗೆ ಫೋನ್ ಮಾಡ್ತಿ". ಪಡವಗೋಡು ಅಪ್ಪಿಯ ಅಪ್ಪ, ತನ್ನ ಲಿಂಗ್ದಳ್ಳಿ ಬಾವನಿಗೆ(ಅಂದ್ರೆ ಲಿಂಗ್ದಳ್ಳಿ ಅಪ್ಪಿಯ ಅಪ್ಪನಿಗೆ) ಫೋನ್ ಮಾಡಿ ವಿಷಯ ತಿಳಿಸಿದ. ಬೇಳೂರು ಅಜ್ಜನಿಗೂ ವಿಷಯ ಗೊತ್ತಾಯ್ತು. ಅಂವ ಹೇಳಿದ್ದು ಒಂದೇ ಮಾತು, "ಇದೆಲ್ಲಾ ಲಿಂಗ್ದಳ್ಳಿ ಅಪ್ಪಿದೇ ಕಿತಾಪತಿ". ಅವರಲ್ಲಿ ಏನೋ ಮಾತುಕತೆ ಆಯ್ತು. ತಾವು ಯಾರೂ ಹೇಳಿದ್ರೂ ಕೇಳೋ ಸ್ಥಿತಿಯಲ್ಲಿ ಇಲ್ಲೆ ಹುಡುಗ್ರು, ಇವರನ್ನ ಅಲ್ಲೇ ಇರಕ್ಕೆ ಒಪ್ಸಕ್ಕೆ ಒಬ್ಬನಿಗೆ ಮಾತ್ರ ಸಾಧ್ಯ, ಅದ್ರಲ್ಲೂ ಲಿಂಗ್ದಳ್ಳಿ ಅಪ್ಪಿನ ಒಪ್ಸಕ್ಕೆ ಅವನೊಬ್ನೇ ಸೈ, ಪಡವಗೋಡು ಅಪ್ಪಿಯ ಸಣ್ಣ ಚಿಕ್ಕಪ್ಪನನ್ನೇ ಶಾಂತಿದೂತನನ್ನಾಗಿ ಉಜಿರೆಗೆ ಕಳಿಸೋದು ಅಂತ ನಿರ್ಧಾರ ಆಯ್ತು. ಇತ್ತ ಹಾಸ್ಟೆಲ್‌ನಲ್ಲಿ ಲಿಂಗ್ದಳ್ಳಿ ಅಪ್ಪಿ ಬೆಳಿಗ್ಗೆ ೫ ಗಂಟೆಗೇ ಎದ್ದು ಊರಿಗೆ ಹೊರಡುವ(ಐ ಮೀನ್, ಓಡಿಹೋಗುವ.. ಹ್ಹೆಹ್ಹೆಹ್ಹೆ) ಸಂಭ್ರಮದಲ್ಲಿದ್ದ. ೭:೩೦ಕ್ಕೆ ಬೆಳ್ತಂಗಡಿಯಿಂದ ಬಸ್ಸು. ೬ ಗಂಟೆಗೆ ಸರಿಯಾಗಿ ಇವನಿಗೆ ಹಾಸ್ಟೆಲ್ ಎದುರಿಗಿದ್ದ ಫೋನ್‌ಬೂತ್ ಅಂಕಲ್ ಬಂದು ಹೇಳಿದ್ರು, "ನಿನ್ನ ತಂದೆ ಫೋನ್ ಮಾಡಿದ್ರು.. ನೀನು ಇವತ್ತು ಎಲ್ಲೂ ಹೋಗ್ಬಾರ್ದಂತೆ.. ಕಾಲೇಜಿಗೂ ಹೋಗೋದು ಬೇಡವಂತೆ.. ನಿನ್ನ ಸಣ್ಣ ಮಾವ ಪಡವಗೋಡು ಹುಡುಗನ್ನೂ ಕರ್ಕೊಂಡು ಬರ್ತಾ ಇದಾರಂತೆ".... ಇವನಿಗೋ ಧರ್ಮ ಸಂಕಟ, ಹಿಂಗಾಯ್ತಲ್ಲ ಅಂತ. ಹೊರಟೇ ಬಿಡೋಣ ಅಂದುಕೊಂಡ. "ಆದ್ರೆ ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸಣ್ಣಮಾವ ಬರ್ತಿದ್ದಾನಲ್ಲ, ಅವನಿಗೂ ಹೇಳಿ ಒಪ್ಪಿಸ್ತೀನಿ.. ಅವನಿಗೂ ತೋರಿಸ್ತೀನಿ ಇಲ್ಲಿಯ ಪರಿಸ್ಥಿತಿಯನ್ನ.. ಅಂವ ಹೇಳಿದ್ರೆ ಯಾರೂ ಇಲ್ಲ ಅನ್ನಲ್ಲ ಕೊನೆಗೆ" ಅಂದುಕೊಂಡು ಸುಮ್ಮನಾದ. ಪಡವಗೋಡು ಅಪ್ಪಿ, ಅವನ ಚಿಕ್ಕಪ್ಪ ಮದ್ಯಾಹ್ನ ೨:೩೦ರ ಹೊತ್ತಿಗೆ ಹಾಸ್ಟೆಲ್‌ಗೆ ಬಂದ್ರು.
ಸಂಜೆ ೬ ಗಂಟೆ ಹೊತ್ತಿಗೆ ಲಿಂಗ್ದಳ್ಳಿ ಅಪ್ಪಿಗೆ ಅವನ ಸಣ್ಣಮಾವ ವಾಕಿಂಗಿಗೆ ಕರೆದ. ಇಬ್ರೂ ವಾಕಿಂಗ್ ಮಾಡ್ತಾ ಕಾಲೇಜು ದಾಟಿ ಊರ ಹೊರಗಡೆ ಹೋದ್ರು. ಸಣ್ಣಮಾವ ಮಾತಿನ ಮಧ್ಯೇ ಹೇಳಿದ, "ಪುಟ್ಟಾ, ನೀನು ಇವತ್ತು ಈ ಉಜಿರೆ ಬ್ಯಾಡ ಅಂತ ಹಟ ಮಾಡ್ದೆ, ಸರಿ.... ನಿನ್ನ ಪರಿಸ್ಥಿತಿ ನಂಗೆ ಅರ್ಥ ಆಗ್ತು. ಆದ್ರೆ ಒಂದು ತಿಳ್ಕ, ಇವತ್ತು ನೀನು ಗಟ್ಟಿ ಮನ್ಸು ಮಾಡಿದ್ರೆ ಮುಂದೊಂದು ದಿನ ಇದನ್ನ ನೆನೆಸ್ಕ್ಯತ್ತೆ. ಕಾಲೇಜು ಜೀವನ ಅನ್ನದು ನೀನು ಮುಂದೆ ಏನಾಗಕ್ಕು ಅನ್ನೋ ದಾರಿ ತೋರುಸ್ತು. ನೀನು ಇನ್ನೂ ಊರಿಗೇ ಹೋಗಕ್ಕು ಅಂದ್ರೆ, ಹ್ಯಾಂಗಿದ್ರೂ ಪ್ಯಾಕ್ ಮಾಡಿ ಆಯ್ದು. ನಾನು ಮಾತಾಡ್ತಿ ನಿನ್ ಅಪ್ಪನ ಹತ್ರ, ಊರಿಗೆ ಹೋಗ್ಬುಡನ.... ಆದ್ರೆ ಇವತ್ತು ಊರಿಗೆ ಹೋಗೋ ಅವಸರದ ನಿರ್ಧಾರ ತಗಂಡು, ಮುಂದೊಂದು ದಿನ ನನ್ಹತ್ರಾನೇ ಬಂದು ಮಾವ, ಅವತ್ತು ಉಜಿರೆಲೇ ಇರಕ್ಕಾಗಿತ್ತು ಅನ್ನ ಪರಿಸ್ಥಿತಿ ತಂದ್ಕಳ್ಳಡ. ನನ್ ಅಭಿಪ್ರಾಯದಲ್ಲಿ ನೀನು ಈ ಎರಡು ವರ್ಷ ಇಲ್ಲೇ ಇದ್ದು ಒಂದ್‌ಕೈ ನೋಡು. ಹಂಗೂ ಒಂದ್‌ವೇಳೆ ಆಗದೇ ಇಲ್ಲೆ ಅಂತಾದ್ರೆ ನಾ ಇದ್ದಿ, ಹೆದರ್ಕ್ಯಳ್ಳಡ". ಲಿಂಗ್ದಳ್ಳಿ ಅಪ್ಪಿಗೂ ಧೈರ್ಯ ಬಂತು, ಹೇಳಿದ "ಆತು ಮಾವ, ನೀ ಹೇಳಿದಂಗೇ ಆಗ್ಲಿ. ನೋಡೇಬಿಡನ, ಇಲ್ಲೆ ಯಾಕೆ ಬದುಕಕ್ಕಾಗದಿಲ್ಲೆ ಅಂತ? ಇನ್ನು ಎರಡು ವರ್ಷ ನೋಡ್ತಾ ಇರು, ಇಲ್ಲೇ, ಉಜಿರೆಲೇ ಬದುಕಿ ತೋರುಸ್ತಿ". ಅವರಿಬ್ರೂ ಹಾಸ್ಟೆಲ್ಲಿಗೆ ವಾಪಸ್ ಬಂದು ಪಡವಗೋದಪ್ಪಿಗೂ ಹೇಳಿ ಒಪ್ಪಿಸಿದ್ರು. ಮಾವ ಊರಿಗೆ ಹೋದ. ಕಾಲೇಜು ಜೀವನ ವಿಧ್ಯುಕ್ತವಾಗಿ ಆರಂಭವಾಯ್ತು.
ಉಪಸಂಹಾರ:
ಲಿಂಗ್ದಳ್ಳಿ ಅಪ್ಪಿ ತಾನು ಆಡುಗೆಮನೆಯಲ್ಲಿ ನೋಡಿದ್ದನ್ನ ವಾರ್ಡನ್‌ಗೆ ಹೇಳಿ, ಅಡುಗೆಮನೆಯನ್ನ ರಿಪೇರಿ ಮಾಡಿಸಿದ. ಆ ವಿಚಾರ ಇವನಿಗೆ, ವಾರ್ಡನ್‌ಗೆ ಬಿಟ್ಟರೆ ಯಾರಿಗೂ ಗೊತ್ತಾಗಲಿಲ್ಲ. ಆ ವರ್ಷವಿಡೀ ಅವನು ಮೆಸ್‌ ಇನ್‌ಚಾರ್ಜ್ ಆಗಿದ್ದ. ಮುಂದೆ ಎರಡು ವರ್ಷ ಕಳೆದಮೇಲೆ, ಇಬ್ರೂ ಇಂಜಿನಿಯರಿಂಗ್ ಸೇರಿದ್ರು. ನಾಕು ವರ್ಷದ ನಂತರ ಒಳ್ಳೆ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದ್ರು. ಆಗಾಗ ತಮ್ಮ ಪಲಾಯನ ಪ್ರಸಂಗವನ್ನು ನೆನೆಸಿಕೊಂಡು ಈಗಲೂ ನಗುತ್ತಿರುತ್ತಾರೆ.